ಕರಾವಳಿಯ ಹಲವಡೆ ಬೆಳ್ಳಂಬೆಳಗ್ಗೆ ಉತ್ತಮ ಮಳೆ
ಮಂಗಳೂರು: ಕರಾವಳಿಯ ದ.ಕ, ಕಾಸರಗೋಡು ಉಡುಪಿ ಉ.ಕ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಉತ್ತಮ ಮಳೆಯಾಗಿದೆ.
ವಿಶೇಷವೆಂದರೆ ಬೆಳಗ್ಗೆ 8ಗಂಟೆಯ ಮಾಹಿತಿಯಂತೆ ಕಳೆದ 24 ಗಂಟೆಯಲ್ಲಿ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಗರಿಷ್ಠ 167ಮಿಮಿ ಮಳೆಯಾಗಿತ್ತು. ಕರಾವಳಿಯ ದ.ಕ, ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದೆ. ದ.ಕ ಜಿಲ್ಲೆಯ ಪುತ್ತೂರು ಬಂಟ್ವಾಳ ತಾಲೂಕುಗಳಲ್ಲಿ ಭಾರಿ ಮಳೆಯಾಗಿತ್ತು. ಭಾನುವಾರ ಕರಾವಳಿಯ ಉಡುಪಿ, ದ.ಕ ಜಿಲ್ಲೆಯಲ್ಲಿ ಹಗಲು ಮೋಡದ ವಾತಾವರಣ ಇರಲಿದ್ದು ಹಗಲು ತುಂತುರು - ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಉಡುಪಿ ಕರಾವಳಿ ತೀರದ ತಾಲೂಕುಗಳಲ್ಲಿ ರಾತ್ರಿಯೂ ಮಳೆ ಸಾಧ್ಯತೆ ಇದೆ. ದ.ಕ ಕಾಸರಗೋಡು ಜಿಲ್ಲೆಗಳಲ್ಲಿ ಭಾಗಷಃ ಮೋಡದ ವಾತಾವರಣ ಇರಲಿದ್ದು ಹಗಲು ಅಲ್ಲಲ್ಲಿ ತುಂತುರು ಮಳೆಯಾಗಬಹುದು. ರಾತ್ರಿ ಗುಡುಗು ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ದ.ಕ. ದಲ್ಲಿ ಶನಿವಾರಗಿಂತ ಮಳೆ ಪ್ರಮಾಣ ಕಡಿಮೆ ಇರಬಹುದು, ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 3-4 ದಿನ ಸಂಜೆ, ರಾತ್ರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾಣ ಇಲಾಖೆ ಮಾಹಿತಿ ನೀಡಿದೆ.
ಅರಬ್ಬೀಸಮುದ್ರದಲ್ಲಿ ಕೇರಳ ಸಮೀಪ ಮೇಲ್ಮೈ ಸುಳಿಗಾಳಿಯ ತಿರುಗುವಿಕೆಯು ಸಮುದ್ರದಲ್ಲಿ ಪಶ್ಚಿಮದತ್ತ ಚಲಿಸುತ್ತಿದೆ. ಮತ್ತು ಉತ್ತರ ತಮಿಳುನಾಡು ಕರಾವಳಿಗೆ ಸಮೀಪ ಬಂಗಾಳಕೊಲ್ಲಿಯಲ್ಲಿ ಸರ್ಕ್ಯುಲೇಷನ್ ಇರುವುದರಿಂದ ಕರಾವಳಿ ಕರ್ನಾಟಕದಲ್ಲಿ ಶನಿವಾರ ಸಂಜೆ - ರಾತ್ರಿ ಗುಡುಗು ಮಳೆಯಾಗುವ ಮುನ್ಸೂಚನೆ ಇದೆ.
ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಮುಂದಿನ 3-4 ದಿನ ಮುಂದುವರೆಯಬಹುದು. ಅರಬ್ಬೀಸಮುದ್ರದಲ್ಲಿ ಅ.22 ರ ಅಂದಾಜು ವಾಯುಭಾರಕುಸಿತವಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿಯೂ ಅಂಡಮಾನ್ ಸಮೀಪ ಅ.25 ರ ಅಂದಾಜು ಇನ್ನೊಮ್ಮೆ ವಾಯುಭಾರಕುಸಿತ ಆಗಲಿದ್ದು, ಇದು ಉತ್ತರದತ್ತ ಚಲಿಸಿದರೆ ನಂತರ ಹಿಂಗಾರು ಮಾರುತಗಳು ದುರ್ಬಲವಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.