ತುಳು ಭಾಷೆಗೆ ಪ್ರತ್ಯೇಕ ಧ್ವಜ ಬೇಕು: ಕಾಂಗ್ರೆಸ್ ಕಚೇರಿಯಲ್ಲಿ ಚಿಂತನಾ ಸಭೆ
ಬ್ಯಾಂಕ್, ಪೊಲೀಸ್ ಠಾಣೆ, ಅಂಚೆ ಕಚೇರಿ ಮೊದಲಾದ ಸರಕಾರಿ ಕಚೇರಿಗಳಲ್ಲಿ ತುಳು ಭಾಷೆ ಸಮರ್ಪಕವಾಗಿ ಅನುಷ್ಠಾನಗೊಳ್ಳಲಬೇಕಾದರೆ ಇಂತಹ ಕಚೇರಿಗಳಲ್ಲಿ ತುಳು ಬಲ್ಲವರನ್ನು ನೇಮಕ
ಮಾಡುವ ಅಗತ್ಯವಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ತುಳು ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಬೇಕು. ತುಳುವಿನಲ್ಲೇ ಡಿಪ್ಲೊಮಾ, ಪಿಎಚ್ ಡಿ ಅಧ್ಯಯನಗಳು ನಡೆಯಬೇಕು. ಮುಖ್ಯವಾಗಿ ತುಳುವಿನ ಚರಿತ್ರೆಯ ಅಧ್ಯಯನವಾಗಬೇಕು ಎಂದು ಬೆನೆಟ್ ಅಮ್ಮನ್ನ ಹೇಳಿದರು.
ಸಾಹಿತಿ ಡಾ. ಪ್ರಭಾಕರ ನೀರುಮಾರ್ಗ ಮಾತನಾಡಿ, ತುಳುವಿನ ಹುಟ್ಟು, ಬೆಳವಣಿಗೆ ಕೃಷಿಯಿಂದಲೇ ಆಗಿದೆ. ತುಳುನಾಡಿನಲ್ಲಿರುವ ವಿವಿಧ ರೀತಿಯ ಆರಾಧನೆ, ಕಟ್ಟುಕಟ್ಟಳೆಗಳು, ಯಕ್ಷಗಾನ, ತಾಳಮದ್ದಲೆಯಂತಹ ಕಲೆಗಳು ಕೃಷಿ ಮತ್ತು ಕೃಷಿಕರೊಂದಿಗೆ ಸಂಬಂಧ ಹೊಂದಿವೆ. ಆದರೆ ಇಂದು ಕೃಷಿ ಚಟುವಟಿಕೆಗಳಿಂದ ವಿಮುಖರಾಗುತ್ತಿರುವುದರಿಂದ ತುಳುವಿನ ಸಂಸ್ಕೃತಿ, ಆಚಾರ, ವಿಚಾರ ಕೂಡ ಮರೆಯಾಗುತ್ತಿದೆ. ಯುವಕರಿಗೆ ತುಳುವಿನ ಚರಿತ್ರೆ, ಮಹತ್ವವನ್ನು ತಿಳಿಸಿ ಅವರಲ್ಲಿ ತುಳು ಅಭಿಮಾನವನ್ನು ಇನ್ನಷ್ಟು ಹೆಚ್ಚಿಸಬೇಕು. ಪಾಡ್ದನಗಳು ತುಳು ಇತಿಹಾಸವನ್ನು ಹೊಂದಿದ್ದು ಅವುಗಳನ್ನು ಸಂಗ್ರಹಿಸುವ, ರಕ್ಷಿಸುವ ಕೆಲಸವಾಗಬೇಕು. ತುಳುವಿನ ಇತಿಹಾಸ ಬಿಂಬಿಸುವ ಕೃತಿಗಳು ಪ್ರಕಟವಾಗಬೇಕು. ತುಳು ಕಲಾವಿದರಿಗೂ ಪ್ರೋತ್ಸಾಹ ಸಿಗಬೇಕು ಎಂದು ಹೇಳಿದರು.
ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಮಾತನಾಡಿ, ತುಳುವಿನ ಮುಂದಿನ ಬೆಳವಣಿಗೆಗೆ ಚಟುವಟಿಕೆಗಳನ್ನು ನಡೆಸಲು ಸಂಪನ್ಮೂಲದ ಅಗತ್ಯವಿದೆ. ಹಾಗಾಗಿ ತುಳು ನಿಗಮ, ಪ್ರಾಧಿಕಾರದ ಅಗತ್ಯವಿದೆ. ತುಳು ಭಾಷೆಯ ಅಭಿವೃದ್ದಿಗೆ ನಿರಂತರ ಕೆಲಸವಾಗಬೇಕು ಎಂದು ಹೇಳಿದರು.
ಮಾಜಿ ಕಾರ್ಪೊರೆಟರ್ ನವಾಝ್ ಮಾತನಾಡಿ, ತುಳು ಕಲಿಸುವ ಅಧ್ಯಾಪಕರನ್ನು ಸಿದ್ದಗೊಳಿಸಬೇಕು. ಹಿಂದಿ ಪ್ರಚಾರ ಸಮಿತಿ ಮಾದರಿಯಲ್ಲಿ ತುಳುಪ್ರಚಾರ ಸಮಿತಿ ಮಾಡಿ ಅದರ ಮೂಲಕ ಶಿಕ್ಷಕರನ್ನು ತರಬೇತಿಗೊಳಿಸಬೇಕು. ಪಠ್ಯಪುಸ್ತಕ ರಚಿಸಿ ಎಲ್ಲ ಶಾಲೆಗಳಲ್ಲಿ ಐಚ್ಚಿಕವಾಗಿ ತುಳು ಕಲಿಯುವಂತೆ ಮಾಡಬೇಕು. ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ನಗರ ಜಿಲ್ಲಾಧ್ಯಕ್ಷೆ ಅಪ್ಪಿ ಮಾತನಾಡಿ, ತುಳು ಲಿಪಿ ಅಭಿವೃದ್ದಿಪಡಿಸಿ ಅದು ಶಾಲೆಗಳಲ್ಲಿ ಮಕ್ಕಳು ಕಲಿಯುವಂತೆ ಮಾಡಬೇಕು. 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟಾಗ ಶಾಶ್ವತವಾದ ಅಧಿಕೃತತೆ ಸಿಗುತ್ತದೆ. ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

