ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅ.28 ರಿಂದ ಮೊದಲಿನಂತೆಯೇ ಸಂಕಲ್ಪ ಸೇವೆ
ದಿನದಿಂದ ದಿನಕ್ಕೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ವಿಶೇಷವಾಗಿ ರಜಾದಿನಗಳು ಹಾಗೂ ಆಶ್ಲೇಷ ನಕ್ಷತ್ರದ ದಿನಗಳಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ದಿನವೊಂದಕ್ಕೆ ಸುಮಾರು 2,000ರಿಂದ 3,000ರವರೆಗೆ ಆಶ್ಲೇಷ ಬಲಿ ಪೂಜೆಗಳು ಸೇರಿದಂತೆ ವಿವಿಧ ಸೇವೆಗಳ ಸಂಕಲ್ಪ ನಡೆಯುತ್ತಿತ್ತು. ಇದರಿಂದಾಗಿ ಭಕ್ತರು ಸಂಕಲ್ಪಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಸಂದರ್ಭಗಳಲ್ಲಿ ನೂಕುನುಗ್ಗಲು ಉಂಟಾಗದಂತೆ ತಡೆಯುವುದು, ಭಕ್ತರ ಸುರಕ್ಷತೆ ಕಾಪಾಡುವುದು ಹಾಗೂ ಎಲ್ಲರಿಗೂ ಅನುಕೂಲಕರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಅಷ್ಟಮಂಗಲ ಪ್ರಶ್ನೆಯಲ್ಲಿ ಚಿಂತನೆ ನಡೆಸಿದ ಬಳಿಕ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಜಾರಿಗೆ ತರಲು ಆಡಳಿತ ಮಂಡಳಿ ನಿರ್ಧರಿಸಿತ್ತು.
ಭಕ್ತರ ಸುರಕ್ಷತೆಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ:
2026ರ ಸೆಪ್ಟೆಂಬರ್ 20ರಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ದೇವರ ದರ್ಶನಕ್ಕಾಗಿ ಒಳಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದುದನ್ನು ಗಮನಿಸಿದ್ದರು. ಈ ವೇಳೆ ಭಕ್ತರ ಸುರಕ್ಷತೆಯ ಕುರಿತು ಅಧಿಕಾರಿಗಳ ಗಮನ ಸೆಳೆದಿದ್ದ ಅವರು, ದರ್ಶನದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಯಾವುದೇ ಅವಘಡ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದರು.
ಸಾಮೂಹಿಕ ಸಂಕಲ್ಪ ವ್ಯವಸ್ಥೆಗೆ ಭಕ್ತರು ತಮ್ಮ ಒಪ್ಪಿಗೆ ಹಾಗೂ ಮೆಚ್ಚುಗೆ ಸೂಚಿಸಿದ್ದರು ಕೂಡ ದೇವಸ್ಥಾನಕ್ಕೆ ಶ್ರದ್ಧಾಭಕ್ತಿಯಿಂದ ಬರುವ ಒಬ್ಬ ಭಕ್ತನ ಮನಸ್ಸಿಗೂ ನೋವಾಗಬಾರದು ಎಂಬ ಉದ್ದೇಶದಿಂದ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಹಿಂಪಡೆದು, ಮೊದಲಿನ ರೀತಿಯಲ್ಲಿಯೇ ಸಂಕಲ್ಪ ಸೇವೆ ನಡೆಸಲು ನಿರ್ಧರಿಸಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.
ಭಕ್ತರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವುದು ಹಾಗೂ ಪ್ರತಿಯೊಬ್ಬ ಭಕ್ತನಿಗೂ ತನ್ನ ಇಷ್ಟದಂತೆ ಸಂಕಲ್ಪ ಸೇವೆ ಸಲ್ಲಿಸಲು ಅನುಕೂಲ ಕಲ್ಪಿಸುವುದು ಆಡಳಿತ ಮಂಡಳಿಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಸಂಕಲ್ಪ ಮಂದಿರದಲ್ಲಿ ಮೊದಲಿನ ರೀತಿಯಲ್ಲಿಯೇ ಸಂಕಲ್ಪ ಸೇವೆಗಳು ನಡೆಯಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಾಸ್ಟರ್ ಪ್ಲಾನ್ ಯೋಜನೆಯಲ್ಲಿ ವಿಶಾಲ ಸಂಕಲ್ಪ ಮಂದಿರ ನಿರ್ಮಾಣ:
ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾದರೂ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲು ದೇವಸ್ಥಾನದ ಮಾಸ್ಟರ್ ಪ್ಲಾನ್ ಯೋಜನೆಯಡಿ ವಿಶಾಲವಾದ ಹಾಗೂ ಸುಸಜ್ಜಿತ ಸಂಕಲ್ಪ ಮಂದಿರ ನಿರ್ಮಿಸಲು ಯೋಜಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಹೊಸದಾಗಿ ನಿರ್ಮಾಣವಾಗಲಿರುವ ಸಂಕಲ್ಪ ಮಂದಿರದಲ್ಲಿ ಸಾಮೂಹಿಕ ಸಂಕಲ್ಪ ಮತ್ತು ಪ್ರತ್ಯೇಕ ಸಂಕಲ್ಪ ಎಂಬ ಎರಡು ರೀತಿಯ ವ್ಯವಸ್ಥೆಗಳನ್ನು ಕಲ್ಪಿಸುವ ಉದ್ದೇಶವಿದೆ. ಇದರಿಂದ ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂಕಲ್ಪ ಸೇವೆ ಸಲ್ಲಿಸಲು ಅವಕಾಶ ದೊರೆಯಲಿದೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕೈಗೊಳ್ಳುವ ಕ್ರಮಗಳಿಗೆ ಭಕ್ತರು ಸಹಕರಿಸಬೇಕು ಎಂದು ಹರೀಶ್ ಇಂಜಾಡಿ ಮನವಿ ಮಾಡಿದ್ದಾರೆ.