ಭಾಷೆ, ಸಂಸ್ಕೃತಿ ಉಳಿಯಲು ಯುವ ಜನಾಂಗಕ್ಕೆ ಗಮಕ ಪರಿಚಯಿಸಿ: ಸೋನಿಯಾ ಯಶೋವರ್ಮ
ಅವರು ಅ.25 ರಂದು ಉಜಿರೆ ಎಸ್‌ಡಿಎಂ ಸೆಕೆಂಡರಿ ಶಾಲೆಯ ಕೀರ್ತಿಶೇಷ ಮಂಜಯ್ಯ ಹೆಗ್ಗಡೆ ಸಭಾಂಗಣದಲ್ಲಿ ನಡೆದ ಜಿಲ್ಲಾ 12ನೇ ಗಮಕ ಸಮ್ಮೇಳನದ ಯುವ ಗಮಕ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾವ್ಯ, ಸಾಹಿತ್ಯ, ಸಂಗೀತ ಉಳಿಸಿಕೊಳ್ಳುವಲ್ಲಿ ಗಮಕ ಮಹತ್ವದ ಪಾತ್ರ ವಹಿಸುತ್ತದೆ. ಕಾವ್ಯದ ಅರ್ಥ, ಭಾವ, ಆಳ, ಜ್ಞಾನವನ್ನು ಗಮಕದ ಮೂಲಕ ಅನುಭವಿಸಬಹುದು. ಮೊಬೈಲ್, ಸಾಮಾಜಿಕ ಜಾಲತಾಣದ ಇಂದಿನ ವೇಗದ ಬದುಕಿನಲ್ಲಿ ನಮ್ಮ ಭಾಷೆ, ಸಂಸ್ಕೃತಿ ಮರೆಯಾಗಬಾರದು. ಮಹಾಭಾರತ, ರಾಮಾಯಣಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಹಿಂದೆಯೂ ಬಹಳಷ್ಟಿತ್ತು. ಇಂದಿನ ಎಐ ಅಂದಿನ ಕಾಲದಲ್ಲೂ ಇತ್ತು. ಎಲ್ಲದಕ್ಕೂ ವೈಜ್ಞಾನಿಕ ಕಾರಣವಿದೆ. ಯೋಚನಾ ಬದ್ಧವಾಗಿ ಪರಂಪರೆಯಿಂದ ಬಂದ ಸಂಸ್ಕೃತಿಗೆ ನಾವು ಹೆಮ್ಮೆ ಪಡಬೇಕು ಎಂದರು.
ಪರಾಮರ್ಶೆಗೈದ ಪುತ್ತೂರು ತಾಲೂಕು ಗಮಕ ಕಲಾ ಪರಿಷತ್ ಅಧ್ಯಕ್ಷ ಪ್ರೊ. ವೇದವ್ಯಾಸ ರಾಮಕುಂಜ ಮಾತನಾಡಿ, ಸಣ್ಣ ಮಕ್ಕಳೂ ದೊಡ್ಡ ಮಟ್ಟದ ಕಾರ್ಯಕ್ರಮ ನೀಡಲು ಶಕ್ತರು. ಕಲೆಯೆಂಬುದು ಹೊರಗಿಂದ ಹಚ್ಚಬಲ್ಲ ಲಾಟೀನಲ್ಲ. ಯುವ ಜನರಲ್ಲಿ ಗಮಕದ ಬಗೆಗೆ ಆಸಕ್ತಿ ಬೆಳೆಸಲು ಸ್ಫೂರ್ತಿ, ಪ್ರೇರಣೆಯಾಗಬೇಕು ಎಂದರು.
ಕರ್ಣಭಾರತ ಕಥಾಭಾಗವನ್ನು ಸನತ್‌ಕುಮಾರ ಪದ್ಯಾಣ ವಾಚಿಸಿ, ಕಾರ್ತಿಕೇಯ ಮಯ್ಯ ವ್ಯಾಖ್ಯಾನಿಸಿದರು. ಕರ್ಣಭೇದನ ಭಾಗವನ್ನು ಪುತ್ತೂರಿನ ಸನ್ಮಯ್ ವಾಚಿಸಿ, ಬೆಳಾಲು ಪ್ರೌಢ ಶಾಲೆಯ ಸೃಜನ್ ಮತ್ತು ನೇತ್ರಾವತಿ ವ್ಯಾಖ್ಯಾನಿಸಿದರು. ತೊರವೆ ರಾಮಾಯಣದ ಸೀತಾ ಸ್ವಯಂವರ ಕಥಾಭಾಗವನ್ನು ದೀಪ್ತಿ ಕುಬಣೂರಾಯ ಮತ್ತು ಮಾಯಾ ಲಕ್ಷ್ಮೀ ಕಜೆ ವಾಚಿಸಿ, ಮಂಚಿಯ ಬ್ರಾಹ್ಮೀ ಎಸ್. ಭಟ್ ವ್ಯಾಖ್ಯಾನಿಸಿದರು.
ಸಮ್ಮೇಳನ ಸರ್ವಾಧ್ಯಕ್ಷ ಜಯರಾಮ ಕುದ್ರೆತಾಯ ಉಪಸ್ಥಿತರಿದ್ದರು. ಅಭಾಸಾಪ ಕಾರ್ಯದರ್ಶಿ ಸುಭಾಷಿಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.