ಸಮುದ್ರಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ
ಉಜಿರೆ ಎಸ್ ಡಿಎಂ ಕಾಲೇಜಿನ ಒಂಭತ್ತು ಮಂದಿ ವಿದ್ಯಾರ್ಥಿಗಳು ಶನಿವಾರದಂದು ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸಂಜೆ ವೇಳೆ ಸೋಮೇಶ್ವರದ ಪೆರಿಬೈಲ್ ಬೀಚ್ ಗೆ ತೆರಳಿದ್ದರು.ಈ ವೇಳೆ ಶೋಭಿತ್ ಮತ್ತು ಆಕಾಶ್ ಎಂಬವರು ಸಮುದ್ರದಲ್ಲಿ ನೀರಾಟಕ್ಕಿಳಿದಿದ್ದಾರೆ. ಈ ವೇಳೆ ಅಲೆಗಳ ರಭಸಕ್ಕೆ ಇಬ್ಬರೂ ನೀರು ಪಾಲಾಗಿದ್ದರು.ಆಕಾಶ್ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದನು.
ಸಮುದ್ರ ಪಾಲಾಗಿದ್ದ ವಿದ್ಯಾರ್ಥಿ ಶೋಭಿತ್ ಗಾಗಿ ತಡರಾತ್ರಿವರೆಗೂ ಹುಡುಕಾಟ ನಡೆಸಲಾಗಿತ್ತು. ಎಸ್ ಡಿಆರ್ ಎಫ್, ಕರಾವಳಿ ಕಾವಲು ಪಡೆ, ಗೃಹ ರಕ್ಷಕ ದಳ,ಉಳ್ಳಾಲ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿಸಿದ್ದರು.
ಒಂಭತ್ತು ವಿದ್ಯಾರ್ಥಿಗಳ ಪೈಕಿ ಈ ಇಬ್ಬರು ಮಾತ್ರ ನೀರಿಗೆ ಇಳಿದಿದ್ದು, ಉಳಿದ ಏಳು ಮಂದಿ ದಡದಲ್ಲೇ ಇದ್ದರು ಎಂದು ತಿಳಿದು ಬಂದಿದೆ.
ಭಾನುವಾರ ಮಧ್ಯಾಹ್ನದ ವೇಳೆ ಉಳ್ಳಾಲ ವಲಯ ನಾಡ ದೋಣಿ ಹಾಗೂ ಗಿಲ್ನೆಟ್ ಮೀನುಗಾರರ ಸಂಘದ ಪ್ರಮುಖರಾದ ಆಸಿಫ್ ಎಮ್.ಬಿ, ನಿಝಾಮ್ ಕೋಟೆಪುರ, ನಝೀರ್ ಕೋಡಿ, ರಝಾಕ್ ಕೋಟೆಪುರ, ಮುಸ್ತಫಾ ಕೋಟೆಪುರ,ಇರ್ಫಾನ್ ಕೋಟೆಪುರ ಅವರುಗಳು ತುರ್ತು ನಾಡ ದೋಣಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಉಚ್ಚಿಲ ಪೆರಿಬೈಲ್ ಸಮುದ್ರದಲ್ಲಿ ಶೋಭಿತ್ ನ ಮೃತದೇಹವನ್ನ ಪತ್ತೆ ಮಾಡಿದ್ದಾರೆ.
ತುರ್ತು ನಾಡ ದೋಣಿಯಲ್ಲೇ ಕೋಟೆಪುರ ಸಮುದ್ರ ತೀರಕ್ಕೆ ತರಲಾಗಿದ್ದ ಮೃತದೇಹವನ್ನು ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾಣಿಸಿ,ಪ್ರಕರಣ ದಾಖಲಿಸಿದ್ದಾರೆ.