22ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಖಾಸಗಿ ಶಾಲೆಗಳ ಸಿಎಸ್ಆರ್ ನಿಧಿಯ ಮೂಲಕ ಕನ್ನಡ ಶಾಲೆಗಳನ್ನು ನಡೆಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಾಸ್ತವಿಕ ಆರ್ಥಿಕ ಪರಿಸ್ಥಿತಿಯನ್ನೂ ಗಮನಿಸಬೇಕಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೇಲೆ ಸುಮಾರು 500 ಕೋಟಿ ರೂ. ಸಾಲವಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮುಂದುವರಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಿಎಸ್ಆರ್ ನಿಧಿಯ ಮೂಲಕ ಕನ್ನಡ ಶಾಲೆಗಳನ್ನು ನಡೆಸುವುದು ಸುಲಭದ ಮಾತಲ್ಲ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರ ಶಿಕ್ಷಣಕ್ಕಾಗಿ ಸುಮಾರು 38 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದ್ದರೂ ಕನ್ನಡ ಶಾಲೆಗಳಿಗೆ ಅಗತ್ಯ ಶಿಕ್ಷಕರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಪಡೆದ ಮಾತ್ರಕ್ಕೆ ಸಾಧನೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಕನ್ನಡದಲ್ಲಿಯೇ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಬಹುದು ಎಂಬ ವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು. ಖಾಸಗಿ ವಲಯದಲ್ಲಿಯೂ ಕನ್ನಡ ಮಾಧ್ಯಮ ಶಾಲೆಗಳನ್ನು ಸ್ಥಾಪಿಸಿ ಬೆಳೆಸುವ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಕಳೆದ 23 ವರ್ಷಗಳಿಂದ ಶಿಕ್ಷಕರ ನೇಮಕಾತಿ ಸಮರ್ಪಕವಾಗಿ ನಡೆಯುತ್ತಿಲ್ಲ. ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಸುಮಾರು 2,000 ಕನ್ನಡ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಕನ್ನಡ ಭಾಷೆ ಮತ್ತು ಶಾಲೆಗಳ ಉಳಿವಿಗೆ ಸರ್ಕಾರ ಸೂಕ್ತ ಆದ್ಯತೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯ ವಿಚಾರದಲ್ಲಿ ಸರ್ಕಾರದ ನಿಲುವುಗಳನ್ನು ಕನ್ನಡಿಗರು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಕನ್ನಡ ಪತ್ರಿಕೆಗಳ ಪ್ರಸಾರ ಸಂಖ್ಯೆ ಹಾಗೂ ಪುಸ್ತಕಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಸಾಹಿತ್ಯ ಸಮ್ಮೇಳನಗಳು ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ 29 ಕೋಟಿ ರೂ. ವೆಚ್ಚ ಮಾಡಿದ್ದರೂ, ಚರ್ಚೆಗಳು ಊಟೋಪಚಾರದ ವಿಚಾರಗಳಿಗೆ ಸೀಮಿತವಾಗುತ್ತಿರುವುದು ವಿಷಾದನೀಯ. ಸಾಹಿತ್ಯ ಗೋಷ್ಠಿಗಳು, ವಿಚಾರ ವಿನಿಮಯ ಹಾಗೂ ಆರೋಗ್ಯಕರ ಚರ್ಚೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು.
ಕನ್ನಡ ಭಾಷೆಯ ಉಳಿವಿಗಾಗಿ ಸಂಘಟನೆಗಳು ಮತ್ತು ಸರ್ಕಾರದ ಪ್ರಯತ್ನಗಳ ಜೊತೆಗೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಜಾಗೃತಿ ಮೂಡಬೇಕು. ಕನ್ನಡದ ಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಕನ್ನಡದ ಕೈಗಳನ್ನು ಬಲಪಡಿಸಲು ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಕ್ಯಾರಿ ಆ್ಯಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ, ಡಾ. ರವೀಂದ್ರ ಶೆಟ್ಟಿ ಬಜಗೋಳಿ 'ದಶಪ್ರಭಾ' ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ, ಕನ್ನಡ ಭಾಷೆಯನ್ನು ಮಾತನಾಡುವುದರ ಜೊತೆಗೆ ಮಕ್ಕಳನ್ನು ಕನ್ನಡ ಶಾಲೆಗಳಲ್ಲಿ ಕಳಿಸುವುದರ ಮೂಲಕ ಕನ್ನಡದ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಬೆಳೆಸುವಂತಾಗಬೇಕು. ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳ ಮದ್ಯೆ ಸಂಸ್ಕೃತಿ ಬದಲಾವಣೆಯನ್ನು ನಾವು ಗಮನಿಸಬಹುದಾಗಿದೆ. ಬದಲಾವಣೆ ಪ್ರತಿಯೊಬ್ಬ ಕನ್ನಡಿಗನಲ್ಲಿ ಕನ್ನಡ ಭಾಷಾ ಪ್ರಯೋಗದ ಮೂಲಕ ಆಗಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕನ್ನಡ ಶಾಲೆಗಳು ದ್ವಿಭಾಷಾ ಶಾಲೆಗಳಾಗಿ ಬದಲಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಕನ್ನಡದ ಕಂಪನ್ನು ಪಸರಿಸುತ್ತಿರುವ ಕನ್ನಡ ಶಾಲೆಗಳ ಮಹತ್ವವನ್ನು ಅರಿಯಬೇಕು. ಕನ್ನಡ ಶಾಲೆಗಳ ಬಗ್ಗೆ ಋಣಾತ್ಮಕವಾಗಿ ಮಾತನಾಡುವವರು, ಅಲ್ಲಿನ ಒಂದನೇ ತರಗತಿಯ ಮಕ್ಕಳಿಗೆ ಶಿಕ್ಷಣ ನೀಡಲು ಶಿಕ್ಷಕರು ಮಾಡುತ್ತಿರುವ ತ್ಯಾಗ, ಶ್ರಮ ಹಾಗೂ ಬದ್ಧತೆಯನ್ನು ಕಂಡು ಕಲಿಯಬೇಕು ಎಂದರು.
ಕನ್ನಡಕ್ಕಾಗಿ ದುಡಿದ ಡಾ. ಎಂ. ಮೋಹನ್ ಆಳ್ವ ಹಾಗೂ ಹರಿಕೃಷ್ಣ ಪುನರೂರು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಸಿದ್ದಾಪುರ ವಾಸುದೇವ ಭಟ್ ಕನ್ನಡ ಸಾಹಿತ್ಯ ಪರಿಷತ್ ಧ್ವಜವನ್ನು ಸಮ್ಮೇಳನಾಧ್ಯಕ್ಷ ಸಾಹಿತಿ ಹಾಗೂ ಯಕ್ಷಗಾನ ಕಲಾವಿದ ಕೋಟೆ ಎಸ್. ರಾಮ್ ಭಟ್ರವರಿಗೆ ಹಸ್ತಾಂತರಿಸಿದರು.
ಸಮ್ಮೇಳನಾಧ್ಯಕ್ಷ ಸಾಹಿತಿ ಹಾಗೂ ಯಕ್ಷಗಾನ ಕಲಾವಿದ ಕೋಟೆ ಎಸ್. ರಾಮ್ ಭಟ್ ಮಾತನಾಡಿ, ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜಾತಿ, ಮತದ ಭೇದಗಳು ಅಡ್ಡಿಯಾಗಬಾರದು. ಕನ್ನಡ ನಾಡು, ನುಡಿ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ಕನ್ನಡ ಭಾಷಾಭಿಮಾನ ಬೆಳೆಸುವ ಜವಾಬ್ದಾರಿ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಮೇಲಿದೆ ಕನ್ನಡ ಪತ್ರಿಕೆಗಳ ಓದು ವಿದ್ಯಾರ್ಥಿಗಳಲ್ಲಿ ಭಾಷಾಜ್ಞಾನ ಹಾಗೂ ಜಗತ್ತಿನ ಅರಿವು ಹೆಚ್ಚಿಸುತ್ತದೆ. ಆದ್ದರಿಂದ ಮಕ್ಕಳಿಗೆ ಕನ್ನಡ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಬೇಕು. ಕನ್ನಡದ ದೀಪ ಕನ್ನಡಿಗರ ಹೃದಯದಲ್ಲಿ ನಂದಾದೀಪವಾಗಿ ಬೆಳಗಬೇಕು. ಕಾರ್ಕಳ ತಾಲೂಕು ಘಟಕದಿಂದ ಆರಂಭವಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಜಾತಿ-ಮತ ಭೇದವಿಲ್ಲದೆ ಕನ್ನಡ ಸಾಹಿತ್ಯದ ಚಟುವಟಿಕೆಗಳು ವ್ಯಾಪಕವಾಗಿ ವಿಸ್ತರಿಸಬೇಕು. ಆಗ ಸಾಹಿತ್ಯ ಸಮ್ಮೇಳನದ ಆಶಯ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಕ್ಷ ಕಲಾರಂಗ ಕಾರ್ಕಳ ಅಧ್ಯಕ್ಷ ವಿಜಯ ಶೆಟ್ಟಿ, ರಂಗ ಸಂಸ್ಕೃತಿ ಕಾರ್ಕಳ ಅಧ್ಯಕ್ಷ ಎಸ್. ನಿತ್ಯಾನಂದ ಪೈ, ಸಹಕಾರ ಭಾರತೀ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ, ಸನೂರ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನರಸಿಂಹ ಕಾಮತ್ ಸಾಣೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಾಣೂರಿನ ಆನುವಂಶಿಕ ಮೊಕ್ತೇಸರ ವೇದಮೂರ್ತಿ ಶ್ರೀರಾಮ್ ಭಟ್, ಧನಲಕ್ಷ್ಮಿ ಎಕ್ಸ್ಪೋರ್ಟ್ಸ್ನ ಶ್ರೀಪತಿ ಭಟ್, ಕಾಪು ಕಸಾಪ ಅಧ್ಯಕ್ಷ ಪುಂಡಲಿಕ ಮರಠೆ ಉಪಸ್ಥಿತರಿದ್ದರು.
ನೀಲಾವರ ಸುರೇಂದ್ರ ಅಡಿಗ ಅವರ 'ಶಿಕ್ಷಕನೋರ್ವನ ಕಥಾಲೋಕ', ದೇವದಾಸ್ ಕೆರೆಮನೆ ಅವರ 'ಉಯ್ಯಾಲೆ', ಡಾ. ಸುಮತಿ ಪಿ. ಅವರ 'ನೆರಳು ಬೆಳಕಿನ ನಡುವೆ' ಹಾಗೂ ಆರ್. ರಮೇಶ್ ಪ್ರಭು ಅವರ 'ಮಾನವ ಜನ್ಮ ಸರ್ವಶ್ರೇಷ್ಠ' ಕೃತಿಗಳು ಲೋಕಾರ್ಪಣೆಗೊಂಡವು.
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿದರು. ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಂದೇ ಮಾತರಂ, ರಾಜೇಶ್ವರಿ ಪದವಿ ಪೂರ್ವ ಕಾಲೇಜು ಸಾಣೂರಿನ ವಿದ್ಯಾರ್ಥಿಗಳು ನಾಡಗೀತೆ ಹಾಗೂ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳದ ವಿದ್ಯಾರ್ಥಿಗಳು ರೈತಗೀತೆಯನ್ನು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಯುವ ಸಾಹಿತ್ಯಬರತ್ನ ಪ್ರಶಸ್ತಿ, ಸೃಜನ ಸಾಹಿತ್ಯ ಸೌರಭ ಪ್ರಶಸ್ತಿ, ಕರುನಾಡ ಸಿರಿ ಪ್ರಶಸ್ತಿ , ಪುಸ್ತಕ ಪರಿಚಾರಕ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.
ಮೆರವಣಿಗೆ ಹಾಗೂ ಧ್ವಜಾರೋಹಣ
ಕಾರ್ಕಳ ತಾಲೂಕು ಸಾಣೂರಿನ ರಾಜೇಶ್ವರಿ ನ್ಯಾಷನಲ್ ಸ್ಕೂಲ್ನಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬೆಳಿಗ್ಗೆ 8.30ಕ್ಕೆ ಸರಕಾರಿ ಶಾಲಾ ಮೈದಾನದಿಂದ ಸಮ್ಮೇಳನಾಧ್ಯಕ್ಷರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ಕನ್ನಡ ತಾಯಿ ಭುವನೇಶ್ವರಿ ದೇವಿಯ ಭವ್ಯ ಶೋಭಾಯಾತ್ರೆಯೊಂದಿಗೆ ಮೆರವಣಿಗೆ ನಡೆಯಿತು. ಕೃಷ್ಣ ಪ್ಯಾಲೇಸ್ ಗ್ರೂಪ್ ಹೊಟೇಲ್ಸ್ನ ಸಂಸ್ಥಾಪಕ ವೈ. ಕೃಷ್ಣ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ಸ್ಥಳೀಯ ಸಾಂಸ್ಕೃತಿಕ ತಂಡಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ, ರಾಜೇಶ್ವರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಚೆಂಡೆ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಬೆಳಿಗ್ಗೆ 9 ಗಂಟೆಗೆ ರಾಜೇಶ್ವರಿ ಎಜುಕೇಷನ್ ಫೌಂಡೇಷನ್ನ ಸಂಸ್ಥಾಪಕ ದೇವಿಪ್ರಸಾದ್ ಶೆಟ್ಟಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ನಿಕಟಪೂರ್ವ ಗ್ರಾ.ಪಂ. ಅಧ್ಯಕ್ಷ ಯುವರಾಜ್ ಜೈನ್ ಉಪಸ್ಥಿತರಿದ್ದರು.
ಕವಿ ಗೋಷ್ಟಿಗಳು:
ಹಿರಿಯ ಸಾಹಿತಿಗಳಾದ ಡಾ. ನಾ. ಮೊಗಸಾಲೆ, ಬಿ. ಜನಾರ್ಧನ್ ಭಟ್, ಕ್ರಿಯೇಟಿವ್ ಕಾಲೇಜು ಸಂಸ್ಥಾಪಕ ಅಶ್ವಥ್ ಎಸ್.ಎಲ್., ಚಿಂತಕ ಮುನಿರಾಜ ರೆಂಜಳ ಉಪಸ್ಥಿತರಿದ್ದರು.
ವಿದ್ಯಾರ್ಥಿ ಗೊಷ್ಠಿಯಲ್ಲಿ ವಿದ್ಯಾರ್ಥಿಗಳಾದ ಮನಸ್ವಿಕುಲಾಲ್, ಶ್ರೀ ಲಕ್ಷ್ಮೀ, ದತ್ತಾತ್ರೇಯ ಸುನೀಲ್ ಕುಮಾರ್, ಸಮೀಕ್ಷಾ, ವಿಭುದೇಂದ್ರ ವಿ, ಹೃತಿಕ್, ಶ್ರೀ ರಕ್ಷಾ ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.
ಸಾಹಿತ್ಯ ಸಂಸ್ಕೃತಿ ಗೋಷ್ಠಿಯಲ್ಲಿ ವಿಧ್ವಾಂಸ ಪ್ರಭಾಕರ ಜೋಶಿ, ಕಸಾಪ ಸಂಘಟನಾಕಾರ್ಯದರ್ಶಿಗಳಾದ ಪಿ.ವಿ. ಆನಂದಸಾಲಿಗ್ರಾಮ, ಸತೀಶ್ ವಡ್ಡರ್ಸೆ ಮೊದಲಾದವರು ಉಪಸ್ಥಿತರಿದ್ದರು.

