ಫೆ.13 ರಂದು ಡಾ.ಮೋಹನ ಆಳ್ವ ಅವರಿಗೆ 75ದ ಅಂಗವಾಗಿ ‘ಅಮೃತ ಮೋಹನೋತ್ಸವ’

ಫೆ.13 ರಂದು ಡಾ.ಮೋಹನ ಆಳ್ವ ಅವರಿಗೆ 75ದ ಅಂಗವಾಗಿ ‘ಅಮೃತ ಮೋಹನೋತ್ಸವ’


ಮಂಗಳೂರು: ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಸಾಮಾಜಿಕ ಕ್ಷೇತ್ರಗಳ ಸಾಧಕ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗ ಅಮೃತ ಮಹೋತ್ಸವ ಸಮಿತಿ-2027ನ್ನು ರಚಿಸಿಕೊಂಡು 2027 ಫೆಬ್ರವರಿ 13 ರಂದು ಮೂಡುಬಿದಿರೆ ಆಳ್ವಾಸ್ ವಿರಾಸತ್ ಮೈದಾನದಲ್ಲಿ ‘ಅಮೃತ ಮೋಹನೋತ್ಸವ’ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮ ಸಂಘಟಿಸಲು ನಿರ್ಧರಿಸಿದೆ.

ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ಡಾ.ಮೋಹನ ಆಳ್ವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದ ಸಮಾಲೋಚನಾ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ.

ಅಮೃತಮಹೋತ್ಸವ ಸಮಿತಿ ಸರ್ವಾಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಇದನ್ನು ಪ್ರಕಟಿಸಿದರು.

ಅಂದು ಸಂಜೆ 4ರಿಂದ ರಾತ್ರಿ 9 ಗಂಟೆ ವರೆಗೆ ಡಾ.ಮೋಹನ ಆಳ್ವ-75 ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ನಡೆಯಲಿದೆ. ಇದೇ ಸಂದರ್ಭ  ಡಾ.ಮೋಹನ ಆಳ್ವರಿಗೆ 15 ಕೋಟಿ ರು. ನಿಧಿಯನ್ನು ಸಮಾಜ ಸಮರ್ಪಿಸಲಾಗುತ್ತದೆ. ಈ ಮೊತ್ತವನ್ನು ಜೀವನದ ಅಂತ್ಯಕಾಲವನ್ನು ಪ್ರತಿಯೊಬ್ಬರು ಸುಖಮಯವಾಗಿ  ಕಳೆಯಲು ಅನುಕೂಲವಾಗುವ ವಾತಾವರಣದ ಬೃಹತ್ ಆಸ್ಪತ್ರೆ ನಿರ್ಮಾಣ, ಉಚಿತ ಡಯಾಲಿಸೀಸ್ ಮೊದಲಾದ ಸಾಮಾಜಿಕ ಚಟುವಟಿಕೆಗಳಿಗೆ ನೆರವಾಗಲಿದೆ. ಇದಲ್ಲದೆ ಸಮಾರಂಭದಲ್ಲಿ ಡಾ.ಅಳ್ವರ ಏಳು ದಶಕಗಳ ಬದುಕು-ಸಾಧನೆಯ ಅಭಿನಂದನಾ ಗ್ರಂಥ ಲೋಕಾರ್ಪಣೆಗೊಳ್ಳಲಿದೆ. ಎಂದರು.

ಪ್ರತ್ಯೇಕ ಟ್ರಸ್ಟ್ ರಚನೆ, ನಿರಂತರ ಚಟುವಟಿಕೆ: 

ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಂದ ಗುರುದಕ್ಷಿಣೆ ರೂಪದಲ್ಲಿ ಕೂಡ ನಿಧಿ ಸಂಗ್ರಹಿಸಲಿದ್ದು, ಡಾ.ಆಳ್ವರ ಅಭಿಮಾನಿಗಳಿಂದ, ಸಮಾಜದಿಂದಲೂ ನಿಧಿ ಸಂಗ್ರಹಿಸಲಾಗುತ್ತದೆ. ಇವೆಲ್ಲದಕ್ಕೂ ಪ್ರತ್ಯೇಕ ಟ್ರಸ್ಟ್ ರಚಿಸಿ ಅದರ ಮೂಲಕವೇ ಸಂಗ್ರಹ ನಡೆಯಲಿದೆ. ಡಾ.ಆಳ್ವರ ಹುಟ್ಟಿದ ದಿನ ಮೇ 30 ರಂದು ಕೂಡ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಡಾ.ಆಳ್ವರ ಸಮಾಜಮುಖಿ ಕಾರ್ಯಕ್ರಮಗಳು ನಿರಂತರ ನಡೆಯಲಿದ್ದು, ಸಮಾಜಕ್ಕೆ ಮಾದರಿಯಾಗುವಂತೆ ಮುಂದುವರಿಯಲಿದೆ ಎಂದರು.

ಇದಕ್ಕಾಗಿ ಈಗಾಗಲೇ ಪ್ರತ್ಯೇಕ ಸಮಿತಿ ರಚಿಸಲಾಗಿದ್ದು, ಮತ್ತೆ 75 ವಲಯ ಸಮಿತಿಗಳನ್ನು ರಚಿಸಲಾಗುವುದು. ಆಯಾ ವಲಯಕ್ಕೆ ಮಾತ್ರ ಡಾ.ಆಳ್ವರ ಅಮೃತೋತ್ಸವದ  ಪ್ಲೆಕ್ಸ್, ಪ್ರಚಾರಕ್ಕೆ ಅವಕಾಶ ನೀಡಲಾಗುವುದು. ಎಲ್ಲೆಂದರಲ್ಲಿ ಬ್ಯಾನರ್, ಫ್ಲೈಕ್ಸ್‌ಗೆ ಅವಕಾಶ ಇರುವುದಿಲ್ಲ ಎಂದರು. ಡಾ.ಆಳ್ವರ ಅಮೃತೋತ್ಸವ ಕಾರ್ಯಕ್ರಮದಲ್ಲಿ  ಅವರಿಗೆ ವೈಯಕ್ತಿಕವಾಗಿ ಹೂಹಾರ, ಸನ್ಮಾನಕ್ಕೆ ಅವಕಾಶ ಇಲ್ಲ. ಎಲ್ಲವೂ ಶಿಸ್ತು, ಡಾ.ಆಳ್ವರ ಗೌರವಕ್ಕೆ ಚ್ಯುತಿಯಾಗದಂತೆ ನಿರ್ದಿಷ್ಟ ಚೌಕಟ್ಟಿನಲ್ಲಿ ಅದ್ದೂರಿಯಾಗಿ  ನಡೆಯಲಿದೆ ಎಂದರು.

ಪೇಜಾವರ ಮಠದಿಂದ 1 ಲಕ್ಷ ರು.:

ಅಮೃತೋತ್ಸವ ಸಮಿತಿ ಗೌರವಾಧ್ಯಕ್ಷರಾದ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಮಾದರಿಯಾಗಿ ಬದುಕಿದವರ  ಆದರ್ಶಗಳು ಇತರರಿಗೂ ಅನುಕರಣೆಯಾಗಬೇಕು. ಡಾ.ಮೋಹನ ಆಳ್ವರು ಸಂಸಾರಕ್ಕಿಂತ ಸಾಮಾಜಿಕ ಬದುಕಿಗೆ ಆದ್ಯತೆ ನೀಡಿದವರು. ಅವರ ಅಮೃತೋತ್ಸವಕ್ಕೆ  ಪೇಜಾವರ ಮಠದಿಂದ 1 ಲಕ್ಷ ರು. ನಿಧಿ ಸಮರ್ಪಿಸುವುದಾಗಿ ಹೇಳಿದರು. 

ಡಾ.ಆಳ್ವರ ಜೀವನ ದಾರಿದೀಪ:

ಅಧ್ಯಕ್ಷತೆ ವಹಿಸಿದ ಅಮೃತಮಹೋತ್ಸವ ಸಮಿತಿ ಸರ್ವಾಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಮಾತನಾಡಿ, ಡಾ.ಮೋಹನ ಆಳ್ವರು ಸಾಧನೆಗಳ ಸರದಾರ ಆಗಿದ್ದಾರೆ.  ಸಮಾಜಮುಖಿ ಕೆಲಸಗಳಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಅವರ ಜೀವನ ಆದರ್ಶ, ದಾರಿದೀಪ. ಸರಳ ವ್ಯಕ್ತಿತ್ವದ ಸದಾ ಹಸನ್ಮುಖಿಯಾಗಿರುವ ಡಾ.ಆಳ್ವರು 2019ರಲ್ಲಿ ನನಗೆ 60ರ ಸಂಭ್ರಮದ ನೇತೃತ್ವ ವಹಿಸಿದ್ದರು. ಅವರ ಪ್ರೇರಣೆಯಿಂದಲೇ ವರ್ಷಂಪ್ರತಿ ಸಮಾಜಕ್ಕೆ ಕೋಟಿ ರು.ಗಳ ಮೊತ್ತ ಸಮರ್ಪಿಸುತ್ತಿದ್ದೇನೆ. ಕಳೆದ  ವರ್ಷ 5 ಸಾವಿರ ಹಿಂದುಳಿದ ಕುಟುಂಬಗಳಿಗೆ 10 ಕೋಟಿ ರು.ಗಳ ಆರ್ಥಿಕ ನೆರವನ್ನು ನೀಡಿದ್ದೇನೆ. ಹೀಗಾಗಿ ಡಾ.ಆಳ್ವರ 75ರ ಸಂಭ್ರಮದ ನೇತೃತ್ವ ವಹಿಸಲು  ಸಂತಸವಾಗಿದೆ ಎಂದರು.

ಕಟೀಲು ದೇವಸ್ಥಾನದ ಅನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಅಸ್ರಣ್ಣ, ಮಾಜಿ ಸಚಿವರಾದ ರಮಾನಾಥ ರೈ, ಕೃಷ್ಣ ಜೆ.ಪಾಲೇಮಾರ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಡಾ.ಸುಧಾಕರ ಶೆಟ್ಟಿ, ದೇವದಾಸ್ ಕಾಪಿಕಾಡ್ ಮತ್ತಿತರರು ಮಾತನಾಡಿದರು.

ವೇದಿಕೆಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸವಣೂರು ಸೀತಾರಾಮ ರೈ, ಪೂರನ್ ವರ್ಮಾ,  ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಶಶಿಧರ ಹೆಗ್ಡೆ ಮತ್ತಿತರರಿದ್ದರು.

ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು.


ನನ್ನ ವೈಭವೀಕರಣ ಬೇಡ, ಸತ್ಕಾರ್ಯದ ಸಂದೇಶ ಹೋಗಲಿ: ಡಾ.ಆಳ್ವ

ಈ ಏಳು ದಶಕದ ನನ್ನ ಜೀವನ ಹಾಗೂ ಸಾಧನೆಗಳ ಬಗ್ಗೆ ಅಮೃತ ಮಹೋತ್ಸವದಲ್ಲಿ ವೈಯಕ್ತಿಕ ನನ್ನ ವೈಭವೀಕರಣಕ್ಕೆ ಅವಕಾಶವೇ ಇಲ್ಲ. ಏನಿದ್ದರೂ ನನ್ನ ಸಾಧ ನೆ ಹಾಗೂ ಸಮಾಜಮುಖಿ ಕೆಲಸಗಳ ಬಗ್ಗೆ ಮಾತ್ರ ಸಂದೇಶ ನೀಡಬಹುದು. ಈ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬಹುದು ಎಂದು ಡಾ.ಮೋಹನ ಆಳ್ವ ಹೇಳಿದರು.

ನನಗೆ 50, 60, 70 ವರ್ಷ ತುಂಬಿದಾಗಲೂ ಸನ್ಮಾನಕ್ಕೆ ಒಪ್ಪಿರಲಿಲ್ಲ. ಅಲ್ಲಿಂದ ಇಲ್ಲಿವರೆಗೂ ಸಾಕಷ್ಟು ಸಂಸ್ಕೃತಿ, ಪರಂಪರೆ, ಸಾಮಾಜಿಕ ಬದುಕಿಗೆ ಒತ್ತು ನೀಡುವ  ಕೆಲಸ ಮಾಡುತ್ತಲೇ ಬಂದಿದ್ದೇನೆ. ನನ್ನ ಬದುಕನ್ನು ಹೇಗೆ ಅನುಭವಿಸಿದ್ದೇನೆ, ನೋವು, ನಲಿವುಗಳ ಅನುಭವ ನನಗೆ ಮಾತ್ರ ಗೊತ್ತು. ಹಾಗಾಗಿ ನನ್ನ ಬದುಕನ್ನು  ಮೂರು ವಿಭಾಗಗಳಾಗಿ ವಿಂಗಡಿಸಿದ್ದೇನೆ. 25ರ ಸುಮಧುರ ಜೀವನ, 25ರಿಂದ 50 ವರ್ಷಗಳ ಸುಂದರ ಜೀವನ ಹಾಗೂ 50ರಿಂದ 70ರ ಸಾರ್ಥಕ ಜೀವನದಲ್ಲಿ ವಿದ್ಯೆ  ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದೇನೆ. ನಾನು ರಾಜಕೀಯ ವೈರಿ ಅಲ್ಲ, ಅದನ್ನು ಇಷ್ಟಪಟ್ಟವನೂ ಅಲ್ಲ. ಹೃದಯವಂತಿಕೆ, ಸಾಮರಸ್ಯದ ಬದುಕು ಕಂಡಿದ್ದೇನೆ.  ಯಾವಾಗಲೂ ಪಾಸಿಟಿವ್ ಚಿಂತನೆ ಮಾಡುತ್ತೇನೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article