ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಸಹಜ ಸಾವು ಪ್ರಕರಣಗಳಿಗೆ (ಅಪರಾಧ ಸಂಖ್ಯೆ 39/2025) ಸಂಬಂಧಿಸಿದಂತೆ ಪ್ರಣಬ್ ಮೊಹಂತಿ ನೇತೃತ್ವದ ವಿಶೇಷ ತನಿಖಾ ತಂಡ (ಎಸ್ಐಟಿ) ಮೂಲಕವೇ ಮುಂದಿನ ತನಿಖೆ ನಡೆಸಲು ರಾಜ್ಯ ಸರಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ನ.30ರಿಂದ ಡಿ.2ರವರೆಗೆ ನಗರದ ಕ್ಲಾಕ್ ಟವರ್ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ. ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳದಲ್ಲಿ ವರದಿಯಾದ ಪ್ರಕರಣಗಳ ಹಿಂದಿರುವ ನೈಜ ವಿಚಾರವನ್ನು ಹೊರತರುವುದು ಮತ್ತು ನ್ಯಾಯದ ನಿರೀಕ್ಷೆಯಲ್ಲಿರುವ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರಲ್ಲದೆ, ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಡಿ.3ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಧರ್ಮಸ್ಥಳದಲ್ಲಿ ಸಂಭವಿಸಿದ ಅಸಹಜ ಸಾವು ಪ್ರಕರಣಗಳ ತನಿಖೆಗಾಗಿ 2025ರಲ್ಲಿ ಎಸ್ಐಟಿ ರಚಿಸಲಾಗಿತ್ತು. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲು ಅನುಕೂಲವಾಗುವಂತೆ ಸರಕಾರಿ ಆದೇಶ ಹೊರಡಿಸಬೇಕೆಂದು ಕೋರಿ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ 2026ರ ಮಾರ್ಚ್ 24ರಂದು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಎಸ್ಐಟಿ ಮುಖ್ಯಸ್ಥರ ಮಾಹಿತಿ ಪ್ರಕಾರ ತನಿಖಾ ತಂಡಕ್ಕೆ 73 ದೂರು ಅರ್ಜಿಗಳು ಬಂದಿದ್ದವು. ಅವೆಲ್ಲವುಗಳ ಸಮಗ್ರ ಪರಿಶೀಲನೆಯ ಅಗತ್ಯವಿದೆ ಎಂದು ಜಯಂತ್ ಟಿ. ಪ್ರತಿಪಾದಿಸಿದರು. 1998ರಿಂದ 2014ರವರೆಗಿನ ಅವಧಿಯ ಅಧಿಕೃತ ಅಸಹಜ ಮರಣ ಪ್ರಕರಣಗಳ (ಯುಡಿಆರ್) ದಾಖಲೆಗಳಲ್ಲಿ 1,480 ಪ್ರಕರಣಗಳಲ್ಲದೆ ಇತರ ಮೂಲಗಳ ಮಾಹಿತಿ/ದಾಖಲೆಗಳ ಪ್ರಕಾರ 1,510 ಪ್ರಕರಣಗಳು ಕಂಡು ಬಂದಿದೆ. ಈ ಅಂಕಿ ಅಂಶಗಳಲ್ಲಿ ಕಂಡುಬರುವ 30 ಪ್ರಕರಣಗಳ ವ್ಯತ್ಯಾಸ ಸಹಿತ ಸಂಬಂಧಪಟ್ಟ ಎಲ್ಲಾ ಮೂಲ ದಾಖಲೆಗಳ ಸಮಗ್ರ ಪರಿಶೀಲನೆ ನಡೆಸುವುದು ಅಗತ್ಯವಿದೆ ಎಂದು ಜಯಂತ್ ಹೇಳಿದರು.
ತನಿಖೆಯ ಬಗ್ಗೆ ರಾಜ್ಯ ಮಹಿಳಾ ಆಯೋಗವು ಸರಕಾರಕ್ಕೆ ಐದು ಬಾರಿ ಪತ್ರ ಬರೆದಿದ್ದಾರೆ. ಆದರೆ ಈವರೆಗೆ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದ ಜಯಂತ್, ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರದಿಯಾಗಿರುವ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಅಸ್ವಾಭಾವಿಕ ಸಾವು ಪ್ರಕರಣಗಳ ಕುರಿತು ಹೆಚ್ಚಿನ ತನಿಖೆ ನಡೆಸಲು ಎಸ್ಐಟಿಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ದೂರಿನಲ್ಲಿ ಉಲ್ಲೇಖಿಸಲಾದ 73 ಯುಡಿಆರ್ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು. ಯುಡಿಆರ್, ಮರಣೋತ್ತರ ಪರೀಕ್ಷೆ, ಪೊಲೀಸ್, ಆಸ್ಪತ್ರೆ ಮತ್ತು ಗ್ರಾಪಂ ದಾಖಲೆಗಳನ್ನು ಸಂರಕ್ಷಿಸಿ ಸಮಗ್ರ ಪರಿಶೀಲನೆ ನಡೆಸಬೇಕು. ಪದ್ಮಲತಾ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಆನೆ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಾನೂನುಬದ್ಧವಾಗಿ ಮರು ಪರಿಶೀಲಿಸಬೇಕು. ತನಿಖಾ ಸಂಸ್ಥೆಯೊಂದರ ಮೂಲಕ ಸ್ವತಂತ್ರ ತನಿಖೆ ನಡೆಸಬೇಕು ಎಂದು ಜಯಂತ್ ಆಗ್ರಹಿಸಿದರು.
ಕೇಂದ್ರ ಸರಕಾರವು ಯಾವುದೇ ಪೂರ್ವ ಸೂಚನೆ ನೀಡದೆ ನಿರ್ಬಂಧಿಸಿರುವ 250ಕ್ಕೂ ಹೆಚ್ಚು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ತಕ್ಷಣ ಪುನಃ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ದಿನೇಶ್, ತನುಷ್ ಶೆಟ್ಟಿ ಮತ್ತು ಚರಣ್ ಉಪಸ್ಥಿತರಿದ್ದರು.