ರಾಷ್ಟ್ರೀಯತೆಯ ಭಾವನೆ ಮೂಡಿಸುವ ಪ್ರಯತ್ನಕ್ಕೆ ಪ್ರತಿಪಕ್ಷಗಳ ಅಡ್ಡಿ: ಸಚಿವ ಸುರೇಶ್ ಗೋಪಿ ಆರೋಪ
ಮಂಗಳೂರಿನಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಬಿಜೆಪಿ ಶುಕ್ರವಾರ ಇಲ್ಲಿನ ಕದ್ರಿ ಮೈದಾನದಲ್ಲಿ ಆಯೋಜಿಸಿದ ‘ಪ್ರಜಾಪ್ರಭುತ್ವವನ್ನು ಉಳಿಸಿ-ಅರಾಜಕತೆ ಅಳಿಸಿ’ ಘೋಷಣೆಯಡಿ ನಡೆದ ಪಾದಯಾತ್ರೆ ಮತ್ತು ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರತಿಪಕ್ಷಗಳ ಒಟ್ಟುಗೂಡಿದ ಷಡ್ಯಂತ್ರದ ಭಾಗವಾಗಿ ಈ ರೀತಿಯ ಅಪಪ್ರಚಾರ ನಡೆಯುತ್ತಿದೆ. ಪ್ರತಿಪಕ್ಷಗಳಲ್ಲಿರುವ ಎಲ್ಲ ಪಕ್ಷಗಳೂ ಸರ್ಕಾರದ ವಿರುದ್ಧವಾಗಿಲ್ಲ. ಕೆಲವು ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತದ ನೈಜ ಶಕ್ತಿ ಮತ್ತು ಸಾಮರ್ಥ್ಯದ ಅರಿವಿದೆ ಎಂದು ಅವರು ಹೇಳಿದರು.
ಇದು ಕೇವಲ ಆರಂಭವಷ್ಟೇ. ನೀವು ಬೆಂಕಿ ಹಚ್ಚಿದ್ದೀರಿ, ಅದರ ಶಾಖವನ್ನು ನಾವು ಅನುಭವಿಸಿದ್ದೇವೆ. ಈಗ ನಿಮ್ಮ ಹಾಗೂ ನಿಮ್ಮ ಉದ್ದೇಶಗಳ ವಿರುದ್ಧವೇ ನಾವು ಹೋರಾಟ ನಡೆಸಲಿದ್ದೇವೆ. ಪ್ರತಿಪಕ್ಷಗಳು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಸುರೇಶ್ ಗೋಪಿ ಅವರು ರಾಜ್ಯ ಗೃಹ ಸಚಿವರನ್ನು ಉಲ್ಲೇಖಿಸಿ ಹೇಳಿದರು.
ಕಾಂಗ್ರೆಸ್ ಅಪನಂಬಿಕೆ ಯತ್ನ:
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕಳೆದ ಎರಡೂವರೆ ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ದೇಶದ ಚುನಾವಣಾ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕುಗ್ಗಿಸುವ ವ್ಯವಸ್ಥಿತ ಅಭಿಯಾನ ನಡೆಸುತ್ತಿದ್ದಾರೆ. ಒಂದೇ ಸುಳ್ಳನ್ನು ಸಾವಿರಾರು ಬಾರಿ ಪುನರಾವರ್ತಿಸಿ ಸತ್ಯವೆಂದು ಬಿಂಬಿಸುವ ಮೂಲಕ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಜನರಿಗೆ ಅಪನಂಬಿಕೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಆಡಳಿತ ಬದಲಾವಣೆಯ ಮಾದರಿಯಲ್ಲೇ ಭಾರತದಲ್ಲೂ ಕ್ರಾಂತಿಯ ಮೂಲಕ ಸರ್ಕಾರ ಬದಲಿಸುವ ಪ್ರಯತ್ನಕ್ಕೆ ಕೆಲವರು ಪ್ರೇರಣೆ ಪಡೆದಿದ್ದಾರೆ. ಚುನಾಯಿತ ಸರ್ಕಾರವನ್ನು ‘ಆಡಳಿತ ವ್ಯವಸ್ಥೆ’ ಎಂಬ ಅರ್ಥದಲ್ಲಿ ‘ರೆಜಿಮ್’ ಎಂದು ಕರೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರ್ದಿಷ್ಟ ರೀತಿಯ ರಾಜಕೀಯ ಭಾಷೆಯನ್ನು ಬಳಸಲಾಗುತ್ತಿದೆ ಎಂದು ಅವರು ಟೀಕಿಸಿದರು.
ಬಿಜೆಪಿ ನಿರಂತರವಾಗಿ ಜನರ ವಿಶ್ವಾಸ ಗಳಿಸಿ ಚುನಾವಣೆಗಳಲ್ಲಿ ಗೆಲ್ಲುತ್ತಿಲ್ಲ, ಚುನಾವಣಾ ಆಯೋಗ ಬಿಜೆಪಿಯ ಏಜೆಂಟ್ನಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಗೆಲುವು ಸಾಧಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮೋದಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರನ್ನು ಕೋಟ್ಯಂತರ ಸಂಖ್ಯೆಯಲ್ಲಿ ಅಳಿಸಲಾಗುತ್ತಿದೆ ಎಂಬ ಆರೋಪಗಳಿಗೂ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದರು.
ಚುನಾವಣಾ ವ್ಯವಸ್ಥೆಯ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುವ ಬದಲು ಜನಾದೇಶವನ್ನು ಗೌರವಿಸಬೇಕು. ಪ್ರಜಾಪ್ರಭುತ್ವದ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಜನರ ವಿಶ್ವಾಸವನ್ನು ಕುಗ್ಗಿಸುವ ಪ್ರಯತ್ನವನ್ನು ಕಾಂಗ್ರೆಸ್ ನಿಲ್ಲಿಸಬೇಕು ಎಂದು ತೇಜಸ್ವಿ ಸೂರ್ಯ ಹೇಳಿದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಮಾತನಾಡಿದರು.
ವೇದಿಕೆಯಲ್ಲಿ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಉಮಾನಾಥ ಕೋಟ್ಯಾನ್, ಭಾಗೀರಥಿ, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳಿ, ಕಿಶೋರ್ ಕುಮಾರ್, ಮಾಜಿ ಸಚಿವ ಕೃಷ್ಣ ಪಾಲೇಮಾರ್, ಮಾಜಿ ಶಾಸಕರು, ಉಭಯ ಜಿಲ್ಲೆಗಳ ಪಕ್ಷದ ಮುಖಂಡರು ಇದ್ದರು. ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು.