ಮೂಡುಬಿದಿರೆ: ಇಲ್ಲಿನ ರೋಟರಿ ವಿದ್ಯಾ ಸಂಸ್ಥೆಗಳ 46ನೇ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭವು ಶುಕ್ರವಾರ ಅಮರಾವತಿ ಸಭಾಂಗಣದಲ್ಲಿ ನಡೆಯಿತು.
ಶಾಲಾ ಬ್ಯಾಂಡ್ ಸೆಟ್ ಹಾಗೂ ವಿದ್ಯಾರ್ಥಿನಿಯರ ಪೂರ್ಣಕುಂಭ ಸ್ವಾಗತದೊಂದಿಗೆ ಗಣ್ಯರನ್ನು ಬರಮಾಡಿಕೊಳ್ಳಲಾಯಿತು. ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿ. ಎಂ. ಶಾಲಾ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಮುಖ್ಯ ಅತಿಥಿ, ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (DDPI) ಶಶಿಧರ್ ಜಿ. ಎಸ್., ಕೆ.ಇ.ಎಸ್. ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ರೋಟರಿ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಅನಂತಕೃಷ್ಣ ರಾವ್ ಸ್ವಾಗತಿಸಿ ಮಾತನಾಡಿ, ಜ್ಞಾನದ ಮಹತ್ವವನ್ನು ವಿವರಿಸಿದರು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ಕಳೆದ 46 ವರ್ಷಗಳಿಂದ ಸಂಸ್ಥೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಮುಖ್ಯ ಅತಿಥಿ ಶಶಿಧರ್ ಜಿ. ಎಸ್. ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಾಂಕದ ಜೊತೆಗೆ ಭಾವನಾತ್ಮಕ ಗುಣಾಂಕವನ್ನೂ ಪರಿಗಣಿಸುವಂತೆ ಶಿಕ್ಷಕರಿಗೆ ಕರೆ ನೀಡಿದರು. ಕರಾವಳಿ ಪ್ರದೇಶವು ಅನೇಕ ವೈವಿಧ್ಯಗಳ ತಾಣವಾಗಿದ್ದು, ಇಲ್ಲಿನ ಮಣ್ಣಿನಲ್ಲಿಯೇ ವಿಶೇಷ ಪ್ರತಿಭೆ, ಪರಿಶ್ರಮದ ಸಾಧನಾ ಶಕ್ತಿ, ಸಂಸ್ಕಾರ ಮತ್ತು ಕಾರ್ಣಿಕತೆ ಇದೆ. ಆದ್ದರಿಂದ ಕರಾವಳಿ ಜಿಲ್ಲೆಗಳು ಶಿಕ್ಷಣ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿವೆ ಎಂದರು.
ಶಿಕ್ಷಕರು ಮತ್ತು ಪೋಷಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಪ್ರೀತಿಯಿಂದ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದ ಅವರು, ಸಮೃದ್ಧಿಯ ಸಂಕೇತವಾದ ತುಳು ಭಾಷೆಯ 'ಪೊಲಿ ಪೊಲಿ' ಎಂಬ ವಾಕ್ಯದೊಂದಿಗೆ ರೋಟರಿ ವಿದ್ಯಾ ಸಂಸ್ಥೆಗಳಿಗೆ ಶುಭ ಹಾರೈಸಿದರು.
ಗೌರವ ಅತಿಥಿಯಾಗಿ ಆಗಮಿಸಿದ್ದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹಾಗೂ ಉದ್ಯಮಿ ಅಕ್ಷಯ್ ಜೈನ್ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದರು. ನಮ್ಮನ್ನು ಹುಡುಕಿಕೊಂಡು ಬರುವ ಅವಕಾಶಗಳನ್ನು ಎಂದಿಗೂ ಕೈಬಿಡಬಾರದು. ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳ ಸೃಜನಶೀಲ ಕಲಾಕೃತಿಗಳು ಹಾಗೂ ಕರಕುಶಲ ವಸ್ತುಗಳನ್ನು ಒಳಗೊಂಡ ಕಲಾ ಮತ್ತು ಕರಕುಶಲ ಪ್ರದರ್ಶನವನ್ನು ಶಶಿಧರ್ ಜಿ. ಎಸ್. ಅನಾವರಣಗೊಳಿಸಿದರು. ಪ್ರದರ್ಶನದ ಸಿದ್ಧತೆ ಮತ್ತು ಸಂಯೋಜನೆಯ ಉಸ್ತುವಾರಿಯನ್ನು ರೋಟರಿ ವಿದ್ಯಾ ಸಂಸ್ಥೆಗಳ ಶಿಕ್ಷಕರಾದ ಮೋಹನ್, ಗೋಪಾಲಕೃಷ್ಣ ಜಿ. ಕೆ., ಮಹೇಶ್, ಜಯಪ್ರಕಾಶ್, ಶಕುಂತಲಾ, ಮಾಲತಿ ಹಾಗೂ ಗಾಯತ್ರಿ ವಹಿಸಿದ್ದರು.
ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸಂಸ್ಥೆಯ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ನಾರಾಯಣ ಪಿ. ಎಂ. ಮಾತನಾಡಿ, ಸಂಸ್ಥೆಯಲ್ಲಿ ನೀಡಲಾಗುತ್ತಿರುವ ಗುಣಮಟ್ಟದ ಶಿಕ್ಷಣ ಹಾಗೂ ಸತತವಾಗಿ ಶೇ. 100ರಷ್ಟು ಫಲಿತಾಂಶ ದಾಖಲಿಸುತ್ತಿರುವ ಸಾಧನೆಯ ಕುರಿತು ಹರ್ಷ ವ್ಯಕ್ತಪಡಿಸಿದರು. ಈ ಸಾಧನೆಗೆ ಕಾರಣರಾದ ಶಿಕ್ಷಕ ವೃಂದವನ್ನು ಅಭಿನಂದಿಸಿ, ಅತಿಥಿಗಳ ಮಾತುಗಳನ್ನು ಅನುಮೋದಿಸಿದರು. ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರವೀಣ್ಚಂದ್ರ ಜೈನ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್, ರೋಟರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್, ರೋಟರಿ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಲಕ್ಷ್ಮೀ ಮರಾಠೆ, ಉಪಪ್ರಾಂಶುಪಾಲೆ ವೈಶಾಲಿ, ಹಿರಿಯ ಸಂಯೋಜಕ ಗಜಾನನ ಮರಾಠೆ, ಸಂಯೋಜಕಿ ಪ್ರಮೀಳಾ ಸುವರ್ಣ ಹಾಗೂ ಮೂರು ವಿಭಾಗಗಳ ವಿದ್ಯಾರ್ಥಿ ನಾಯಕರಾದ ಲೇಖನ್ ಶೆಟ್ಟಿ, ಈಶಾ ಪ್ರದೀಪ್ ದೇವಾಡಿಗ, ಜೆನಿಲಿಯಾ ಪಿಂಟೊ ಮತ್ತು ಪ್ರತ್ಯೂಷಾ ಉಪಸ್ಥಿತರಿದ್ದರು.
ರೋಟರಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ರೋಟರಿ ಕ್ಲಬ್ ಸದಸ್ಯರಾದ ರತ್ನಾಕರ್, ನಾಗರಾಜ್ ಬಿ., ಮೋಹನ್ ಭಟ್, ಜಯರಾಜ್ ಕಂಬಳಿ, ಸಂದೀಪ್ ನಾಯಕ್, ರಾಮಕೃಷ್ಣ, ರವಿ ಕೋಟ್ಯಾನ್, ಸಚಿನ್ ಹಾಗೂ ರೂಪೇಶ್, ಇನ್ನರ್ ವೀಲ್ ಸಂಸ್ಥೆಯ ಸಹನಾ ನಾಗರಾಜ್ ಮತ್ತು ಸರಿತಾ ಆಶೀರ್ವಾದ್ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ರೋಟರಿ ವಿದ್ಯಾ ಸಂಸ್ಥೆಗಳ ಉಪನ್ಯಾಸಕರು, ಶಿಕ್ಷಕರು, ಆಡಳಿತಾಧಿಕಾರಿ, ವ್ಯವಸ್ಥಾಪಕರು, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಸಂಸ್ಥೆಯಲ್ಲಿ ಸುಮಾರು 30 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ಬಳಿಕವೂ ಸಂಸ್ಥೆಯ ಸೇವೆಯಲ್ಲಿ ನಿರತರಾಗಿದ್ದ ಇತ್ತೀಚೆಗೆ ನಿಧನರಾದ ಶಿಕ್ಷಕೇತರ ಸಿಬ್ಬಂದಿ ದೇವಪ್ಪಣ್ಣ ಅವರ ಕುಟುಂಬಕ್ಕೆ ಧನಸಹಾಯ ನೀಡಲಾಯಿತು. ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪೋಷಕರಾದ ಸೌಮ್ಯಾ ಮತ್ತು ಪ್ರಶಾಂತ್ ನೀಡಿದ 15 ಸಾವಿರ ರೂಪಾಯಿಗಳ ಧನಸಹಾಯವನ್ನು ಕಾರ್ಯಕ್ರಮದಲ್ಲಿ ಕುಟುಂಬಕ್ಕೆ ಹಸ್ತಾಂತರಿಸಿದ್ದು ವಿಶೇಷವಾಗಿತ್ತು.
ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರವೀಣ್ಚಂದ್ರ ಜೈನ್ ವಂದಿಸಿದರು. ಶಿಕ್ಷಕಿ ವಿನಯಾ ಹಾಗೂ ಉಪನ್ಯಾಸಕ ಗೌರಿಶಂಕರ್ ಪಿ. ಎಸ್. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಬಹುಮಾನ ವಿಜೇತರ ಪಟ್ಟಿಯನ್ನು ಸಂಸ್ಥೆಯ ಶಿಕ್ಷಕರಾದ ಸುಮಾ ರಂಜಿತ್, ಶರ್ಮಿಳಾ ಅಮೀನ್, ಪೃಥ್ವಿ ಡಿ. ಯು., ನಿವೇದಿತಾ, ನಮೃತಾ, ಸುಜಾತಾ, ದೀಪಾ ಕೆ. ಕುಮಾರಿ, ಪ್ರೇಮಲತಾ, ಸುಗುಣಾ, ದೀಕ್ಷಿತ್ ಹಾಗೂ ವಿದ್ಯಾಶ್ರೀ ಜೈನ್ ವಾಚಿಸಿದರು.
ರೋಟರಿ ಕೇಂದ್ರೀಯ ಶಾಲೆಯ ಶಿಕ್ಷಕಿ ವಿದ್ಯಾ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ವಿದೀಪ್ ಕಾರ್ಯಕ್ರಮ ನಿರೂಪಿಸಿದರು.