ಕನ್ನಡಿಗರ ಆಶಯ ಮತ್ತು ಮನಸ್ಸು, ಭಾವನೆಗಳಿಗೆ ಪೂರಕವಾಗಿರುವ ಮಹಾಜನ್ ಆಯೋಗದ ವರದಿ
ಅವರು ಕಾಂತಾವರ ಕನ್ನಡ ಸಂಘದ ಸಹಯೋಗದೊಂದಿಗೆ ಮೂಡುಬಿದಿರೆ ರೋಟರಿ ಕ್ಲಬ್ ವತಿಯಿಂದ ಕನ್ನಡ ಭವನದ ವಚನ ವೇದಿಕೆಯಲ್ಲಿ ರವಿವಾರ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದರು. ಕನ್ನಡಿಗರ ಆಶಯ ಮತ್ತು ಮನಸ್ಸು, ಭಾವನೆಗಳಿಗೆ ಪೂರಕವಾಗಿರುವ ಮಹಾಜನ್ ಆಯೋಗದ ವರದಿ ಜಾರಿಯಾದಲ್ಲಿ ಕನ್ನಡ ನಾಡು ನುಡಿಗೆ ಅವಿರತ ಶ್ರಮಿಸಿದ ಚೇತನಗಳ ಹೋರಾಟ ಸಾರ್ಥಕವಾಗುತ್ತದೆ ಎಂದವರು ಹೇಳಿದರು.
ಸಮಾರಂಭದಲ್ಲಿ ಕನ್ನಡ ಸಂಘದ ಮೂಲಕ ಕಾಂತಾವರನ್ನು ನಾಡಿಗೇ ಮಾದರಿಯಾಗಿ ರೂಪಿಸಿದ ಕನ್ನಡ ಸೇನಾನಿ ಡಾ. ನಾ. ಮೊಗಸಾಲೆ ಅವರನ್ನು ಭಾವಪೂರ್ಣವಾಗಿ ಗೌರವಿಸಲಾಯಿತು. ಸಂಘದ ಅಭಿವೃದ್ಧಿ ಕಾರ್ಯಗಳಿಗಾಗಿ ರೂ ಹತ್ತು ಸಾವಿರ ಆರ್ಥಿಕ ನೆರವನ್ನೂ ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಡಾ. ನಾ. ಮೊಗಸಾಲೆ ಅವರು ಕನ್ನಡ ಇಲ್ಲದ ಕಾಂತಾವರದಲ್ಲಿ ಕನ್ನಡಿಗ ಸ್ನೇಹಿತರನ್ನು ಸಂಪಾದಿಸುವುದಕ್ಕಾಗಿ ಸಾಹಿತ್ಯ ಪರಿಚಾರಿಕೆ ಮಾಡಿಕೊಂಡದ್ದು ಎಲ್ಲರ ಪ್ರೋತ್ಸಾಹ ಈ ಹಂತಕ್ಕೆ ತನ್ನನ್ನು ಬೆಳೆಸಿದೆ ಎಂದರು. ಇದೆಲ್ಲದರ ಹಿನ್ನೆಲೆಯಲ್ಲಿ ತೀರಿಸಲಾಗದ ಋಣವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಡಾ. ಆಶೀರ್ವಾದ್ ಕನ್ನಡ ರಾಜ್ಯೋತ್ಸವ ಸಂಭ್ರಮ ಅದು ಒಂದು ದಿನಕ್ಕೆ ಸೀಮಿತವಾಗಬಾರದು. ನಮ್ಮ ಮಾತು, ಮನಸ್ಸು , ಮುಂದಿನ ಪೀಳಿಗೆಯ ಬದುಕಿಗೂ ಕನ್ನಡ ಉಳಿದು ಬೆಳೆಯುವಲ್ಲಿ ನಮ್ಮೆಲ್ಲರ ಕೊಡುಗೆ ಅಗತ್ಯವಿದೆ ಎಂದರು. ಕನ್ನಡ ಮತ್ತು ಕನ್ನಡ ಸಂಘದ ಅಭಿವೃದ್ಧಿಗೆ ರೋಟರಿ ಬಳಗದವರು ಸಾಂಘಿಕವಾಗಿ ಮತ್ತು ವೈಯಕ್ತಿಕ ನೆಲೆಯಲ್ಲೂ ತಮ್ಮ ಸೇವೆ ಸಲ್ಲಿಸಲು ಆಸಕ್ತರು ಎಂದವರು ಪ್ರಕಟಿಸಿದರು.
ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗಣೇಶ್ ಕಾಮತ್ ಎಂ. ಕಾರ್ಯಕ್ರಮ ನಿರೂಪಿಸಿ ರೋಟರಿ ಕಾರ್ಯದರ್ಶಿ ಪ್ರಜ್ವಲ್ ಆಚಾರ್ ವಂದಿಸಿದರು. ಕರ್ನಾಟಕ ಏಕೀಕರಣದ ರೂವಾರಿ ಕೆ.ಬಿ. ಜಿನರಾಜ ಹೆಗ್ಡೆಯವರ ಪುತ್ಥಳಿಗೆ ಮಾಲಾರ್ಪಣೆಯೊಂದಿಗೆ ಕಾರ್ಯಕ್ರಮ ನಡೆಯಿತು.